Sunday, December 12, 2010

ನಾವು, ನಮ್ಮ ಸುತ್ತ.

    ಯಾಕೋ ಉಡುಪಿಗೆ ಹೋಗಿದ್ದೆ. ವಾಪಸ್ ಬರುವಾಗ ಸಂಜೆ ಎಂಟರ ಸಮಯ. ಉಡುಪಿ-ಮಣಿಪಾಲ ಮದ್ಯದ ಅಗಲಿಕರಿಸಿದ ರಸ್ತೆಯಲ್ಲಿ ಬೈಕ್ ಓಡಿಸುವುದು ಮಜವಾಗಿರತ್ತೆ. ಸುತ್ತಲು ಪ್ರಕಾಶಿಸುತ್ತಿರುವ ದೀಪಗಳು, ನೂರು ಮೀಟರಿನಷ್ಟು ಅಗಲವಾದ ರಸ್ತೆ, ಸ್ವಲ್ಪ ಎತ್ತರದಲ್ಲಿ ಸೆಟೆದು ನಿಂತಿರುವ ಮಣಿಪಾಲ ಅನ್ನುವ ಮಾಯಾನಗರಿ. ಕಣ್ಣು ಹಾಯಿಸಿದಸ್ಟು ಕಾಣುವ ಎತ್ತರವಾಗಿ ಎದ್ದು ನಿಂತಿರುವ ಕಟ್ಟಡಗಳು ಬಣ್ಣ-ಬಣ್ಣದ ದೀಪಗಳಿಂದ ಮಿನುಗುತ್ತಿವೆ. ರಸ್ತೆ ಬದಿಯಲ್ಲಿ ಎದ್ದು ನಿಲ್ಲಲು ತಯಾರಾಗುತ್ತಿರುವ ಬೃಹದಾಕಾರದ ಕಟ್ಟಡಗಳು, ರಸ್ತೆಯ ಎರಡೂ ಬದಿಗಳಲ್ಲಿ ತಲೆಯೆತ್ತಿರುವ so called "branded " ಅಂಗಡಿಗಳು.ಯಾರಿಗಾದ್ರು ಕಣ್ಣು ಕಟ್ಟಿ ಇಲ್ಲಿಗೆ ತಂದು ಬಿಟ್ರೆ, ಕಂಡಿತ ಅವ್ರು ಭಾರತದಲ್ಲೇ ಇದ್ದಾರೆ ಅಂದ್ರೆ ನಂಬೋದಿಲ್ಲ. ಇನ್ನು ಸ್ವಲ್ಪ ಸಿಟಿಯಲ್ಲಿ ಬನ್ನಿ, ತೊಡೆ ಕಾಣೋ ತರ ಚಡ್ಡಿ ಹಾಕಿಕೊಂಡು, ಕೈಯಲ್ಲಿ ಸಿಗರೇಟ್ ಇಡ್ಕೊಂಡು, ಮದಿರೆಯ ಮತ್ತಿನಲ್ಲಿ ರಸ್ತೆಯಲ್ಲಿ ಸಿಗೋ ಕನ್ಯಾ ಮಣಿಗಳನ್ನ ನೋಡಿದಮೆಲೊಂತು ನೀವು ಪಕ್ಕ ನಿಮ್ಮ ಸಿಂಗಾಪುರದ ಕಲ್ಪನೆ ನೆನಪು ಮಾಡಿಕೊಂಡರೆ ಅಚ್ಚರಿ ಏನಿಲ್ಲ ಬಿಡಿ. ಅಷ್ಟೊಂದು ಮುಂದುವರೆದಿದ್ದೇವೆ ನಾವು.

 ಕ್ಷಮಿಸಿ.....ನಾನಿಲ್ಲಿ ಯಾವುದೊ ಜೀವನ ಶೈಲಿ ಬಗ್ಗೆ, ಯಾರದೋ ಉಡುಗೆ-ತೊಡುಗೆ ಬಗ್ಗೆ ಮಾತಾಡೋದಿಲ್ಲ. ಅದರ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಅದೆಲ್ಲ ಅವರವರ ವೈಯಕ್ತಿಕ ವಿಚಾರ. ಆದರೆ ನಿಮ್ಮೆಲ್ಲರನ್ನ ಸುಮಾರು ನಾಲ್ಕು ವರ್ಷ ಹಿಂದೆ ಕರದುಕೊಂಡು ಹೋಗೋಕೆ ಇಷ್ಟ ಪಡ್ತೇನೆ, ದಯವಿಟ್ಟು ಬನ್ನಿ.

ಮೊದಲ ಸಲ ಮಣಿಪಾಲ ಗೆ ಬಂದಾಗ ಹಸಿರು ವೈಭವವನ್ನ ಮೆರೆದಿತ್ತು, ರಸ್ತೆಯ ಬದಿಗಳಲ್ಲಿ ಹಸಿರು ತುಂಬಿತ್ತು, ಯಾವುದೋ ಅರಣ್ಯದ ತಪ್ಪಲಿನಲ್ಲಿರುವ ಚಿಕ್ಕ, ಚೊಕ್ಕ ನಗರಿಯಂತಿತ್ತು ಮಣಿಪಾಲ. ಶುದ್ದ ಗಾಳಿ, ಸ್ವಚ್ಛ ಪರಿಸರ, ಎತ್ತ ನೋಡಿದರು ಕಣ್ಣು ತುಂಬುವ ನಿಸರ್ಗ ಸಿರಿ, ಇದೇ ಎಷ್ಟೋ ಜನರನ್ನ ಇಲ್ಲಿಗೆ ಆಕರ್ಷಿಸಿದ್ದರೆ ತಪ್ಪಿಲ್ಲ. ಅಂತಹ ಆಕರ್ಷಣೆಯೇ ಈ ನಗರಕ್ಕೆ ಮುಳುವಾಯ್ತು. ಅಭಿವೃದ್ದಿಯ ಹೆಸರಿನಲ್ಲಿ ಮರಗಳೆಲ್ಲ ಧರೆಗುರುಳಿದವು, ಗಗನ ಚುಂಬಿ ಕಟ್ಟಡಗಳು ತಲೆಎತ್ತಿದವು. ನಿತ್ಯ ಹೋಗೆ ಉಗುಳುವ ಕಾರ್ಖಾನೆಗಳು ಪ್ರಾರಂಭವಾದವು. ಇದಕ್ಕೆ ಸದ್ಯದ ಉದಾಹರಣೆ ಇಲ್ಲೇ ಪಕ್ಕದಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮ.

ಮಣಿಪಾಲ ಗೊತ್ತಿರುವವರಿಗೆ ಇಲ್ಲಿನ "ಪ್ರಸನ್ನ ಗಣಪತಿ" ದೇವಸ್ಥಾನ ಗೊತ್ತಿರಲೇಬೇಕು. ಅಲ್ಲೇ ಪಕ್ಕದಲ್ಲೇ ೩೦-೪೦ ಎಕರೆ ಕಾಡು ಪ್ರದೆಶವಿದ್ದದ್ದು ನೆನಪಾಗಬಹುದು. ಎಂತಹ ಸುಡು ಬಿಸಿಲು, ಸೆಕೆ ಇರುವ ಬೇಸಿಗೆಯಲ್ಲಿ ಕೂಡ ಇದರ ಪಕ್ಕದಲ್ಲೇ ಇರೋ ರಸ್ತೆಯಲ್ಲಿ ಹೋದರೆ, ಒಂದು ಕ್ಷಣ ತಂಗಾಳಿ ನಿಮ್ಮನ್ನ ಸ್ಪರ್ಶಿಸುತ್ತಿದ್ದದನ್ನ ಯಾರು ಮರೆಯೋದಿಲ್ಲ. ಆದರೆ ಇನ್ನು ನಾಲ್ಕು ದಿನ ಬಿಟ್ಟು ಬನ್ನಿ, ನಿಮಗಿಲ್ಲಿ ಕಾಣೋದು ಬರಡು ಭೂಮಿ ಮಾತ್ರ. ಯಾವುದೋ ಪುರುಷಾರ್ಥಕ್ಕಾಗಿ ಇಲ್ಲಿಯ ಮರಗಳನ್ನ ಕಡಿಯಲಾಗುತ್ತಿದೆ.

ಇದು ಇದೊಂದೇ ನಗರದ ಕತೆಯಲ್ಲ, ಪ್ರತಿಯೊಂದು ಪ್ರದೇಶದ ವ್ಯಥೆ ಇದು. ತುಮಕೂರಿನಲ್ಲಿ ಆನೆಗಳಿಂದ ಬೆಳೆ ಹಾನಿ, ರಾಮನಗರದಲ್ಲಿ ಕಡವೆಗಳಿಂದ ಬೆಳೆ ಹಾನಿ,  ಹಾಸನ ಸುತ್ತಮುತ್ತ ಪ್ರಾಣಿಗಳ ಹಾವಳಿ......ಈಗೆಲ್ಲ ನ್ಯೂಸ್ ಚಾನೆಲ್ ಗಳು ಬೊಬ್ಬೆ ಬಡಿದುಕೊಳ್ಳುತ್ತಿವೆ. ಇದಕ್ಕೆಲ್ಲ ಕಾರಣ ಯಾರು, ನಾವೇ ಅಲ್ಲವೇ? ಕಾಡನ್ನೆಲ್ಲ ನಾಶ ಮಾಡುತ್ತಿರುವಾಗ ಪ್ರಾಣಿಗಳಾದ್ರೂ ಎಲ್ಲಿಗೆ ಹೋಗಬೇಕು. ಹುಲಿಗಳನ್ನ ರಕ್ಷಿಸಿ, ಆನೆಗಳನ್ನ ರಕ್ಷಿಸಿ, ಅಂತ ಕೂಗೋ ನಮಗೆ ಅವುಗಳ ವಾಸಸ್ತಳಗಳನ್ನ ರಕ್ಷಿಸಬೇಕು ಅಂತ ಗೊತ್ತಿಲ್ವೆ. ಕಾಡನ್ನ ಸಂಪೂರ್ಣ ಅವಲಂಬಿಸಿರುವ ನಾವು, ಗಾಜಿನ ಮನೆಯಲ್ಲಿದ್ದುಕೊಂಡು ಪಕ್ಕದ ಮನೆಗೆ ಕಲ್ಲೆಸೆಯುವಂತೆ ನದೆದುಕೊಳ್ಳುತ್ತಿರುವುದರಲ್ಲಿ ಅರ್ಥವಿದೆಯೇ.

ಪ್ರತಿಯೊಬ್ಬರಿಗೂ ಎಂದೂ ಮುಗಿಯದಷ್ಟು ಹಣ ಬೇಕು, ಅವಶ್ಯಕತೆಗಿಂತ ದೊಡ್ಡ ಮನೆ ಬೇಕು, ಒಂದಂತಸ್ತಿನ ಮೇಲೆ ಎರಡಿರಬೇಕು, ನೂರು ಮೀಟರ್ ಹೊಗೊದಿದ್ರು ಕಾರ್ ಬೇಕು. ಐಷರಾಮಿ ಜೀವನ ಎಲ್ಲರ ಕನಸು, ಅದರಲ್ಲಿ ತಪ್ಪಿಲ್ಲ. ಆದರೆ ಅವಶ್ಯಕತೆಗು ಮೀರಿದ ಉಪಯೋಗ ಬೇಕೇ? ಮನೆಯ ಸುತ್ತಲು ನೂರಿಪ್ಪತ್ತು ದೀಪಗಳನ್ನ ಹಾಕಿಸಿ ರಾತ್ರಿಯಿಡಿ ಬೆಳಗಿಸುವ ಅವಶ್ಯಕತೆ ಇದೆಯೇ? ಮನೆಯಿಂದ ಹೊರ ಹೋಗುವಾಗ ಹತ್ತಿಸಿದ ದೀಪವನ್ನ ಆರಿಸದೆ ಹೋಗೋದು ಸರಿಯೇ? ನೂರು ಮೀಟರ್ ನಡೆಯಬಹುದಾದ ಜಾಗಕ್ಕೆ ಕಾರಿನ ಅವಶ್ಯಕತೆ ಇದೆಯೇ? "a watt  saved  is a watt shared" ಅನ್ನುವ ಮಾತಿನಲ್ಲಿ ಅರ್ಥ ಇದೆ ಅಲ್ವ?

ಇಂತಹ ಎಷ್ಟೋ ಜನರ ಅಜಾಗರುಕತೆಯಿಂದ ನಮ್ಮ ಅವಶ್ಯಕತೆಗಳು ಹೆಚ್ಚಾಗುತ್ತಿವೆ. ಯಾವುದನ್ನು ಯೋಚಿಸದ ನಮ್ಮ ಹರಾಮಿ ರಾಜಕಾರಿಣಿಗಳು "Gundia Hydro Power Plant " ನಂತ ಪ್ರಾಜೆಕ್ಟ್ ಗಳಿಗೆ ಸಹಿ ಹಾಕುತ್ತಾರೆ. ಇದರಿಂದ ಸುಮಾರು ೧೯೦೦ ಎಕರೆ ದಟ್ಟ ಅರಣ್ಯ ನಾಶವಾಗಲಿದೆ. ನಾವು ಎಂದೂ ಕಂಡು ಕೇಳರಿಯದ ಎಷ್ಟೋ ಸಸ್ಯ, ಪ್ರಾಣಿ ಸಂಕುಲ ಇತಿಹಾಸವಾಗಲಿದೆ.

ಸ್ನೇಹಿತರೇ.....ನಮ್ಮೆಲ್ಲರ ಸಮಯ ಪ್ರಜ್ಞೆ, ಜಾಗರೂಕತೆಯಿಂದ ಇಂತಹ ಎಷ್ಟೋ ಅಚಾತುರ್ಯಗಳನ್ನ ತಪ್ಪಿಸಬಹುದಾದರೆ ನಾವೇಕೆ ಎಚ್ಚೆತ್ತುಕೊಳ್ಳಬಾರದು. ಪ್ರಕೃತಿಯನ್ನ ಪ್ರೀತಿಸೋಣ, ಪೋಷಿಸೋಣ. "ನೋಡುವವರ ಕಣ್ಣಲ್ಲಿ ರಸಾನುಭವ ಶಕ್ತಿ ಇದ್ದರೆ, ಹಕ್ಕಿಗಳು ಹಾರುವ ಹೂವುಗಳಂತೆ ಕಾಣುತ್ತವೆ" ಅನ್ನುವ ಸಲಿಂ ಅಲಿ ಅವರ ಮಾತು ಸರಿ ಅನ್ನುವುದಾದರೆ, ಪ್ರಕೃತಿಯೇಕೆ ಹೂದೊಟವಾಗಬಾರದು....!

1 comment:

  1. ಈ ಕಾಲಕ್ಕೆ ತಕ್ಕನಾಗಿ; ಎಲ್ಲಾ ಅರಾಜುಕ ಯುವಕರಿಕೆ ಚುರುಕು ಮೂಡಿಸುವ - ಎಚ್ಚರಿಕೆಯ ಗಂಟೆ ಬಾರಿಸಿದಿಯ ಪ್ರಿಯ ಗೆಳಯ. ನಿನ್ನ ಬರಹ ಓದ್ತಾ ಇದ್ರೆ ಎದೆಯಾಳದಲ್ಲಿ ಅಳುಕು ಮೂಡಿತು, ಎತ್ತ ಸಾಗುತ್ತಿದೆ ನಮ್ಮಿ ಪಯಣ?! ಎಲ್ಲೊ!! ಮೃದು-ಹಳ್ಳಿ-ಸಜ್ಜನ-ಸರಳ-ಸಮೃದ್ದಿ ಜೀವನದ ಮೆಲುಕು-ನೆನಪು ಮೂಡಿಸಿದಿಯ ಯಶು.
    ಎಲ್ಲಾ ಬುದ್ಧಿ-ಜೀವಿಗಳೇ ಇರೋದು ನಮ್ಮ ಸುತ್ತ-ಮುತ್ತ, ಏನೋ ಚೂರು-ಪಾರು ಓದಿಕೊಂಡು ಏನೋ ಪ್ರಗತಿ ಅಂತ ಬೊಗಳೆ ಬಿಡುತ್ತಾ ಬರಿಯ ಟೊಳ್ಳು ಜೀವನ ಸಗಸ್ತಾ ಇದ್ದಾರೆ ಅಷ್ಟೇ. "ಸರಳ ಜೀವನ-ಉದಾತ್ತ-ಉನ್ನತ ವಿಚಾರೆ ಧಾರೆಯೇ" ನಮ್ಮ ಜೀವನದ ಮುಕ್ಯ ಮಂತ್ರ ಆಗಬೇಕು. ನಾವು ಪ್ರಗತಿಯ ಹೆಸರಿನಲ್ಲಿ ಎಷ್ಟೇ ಪ್ರಕೃತಿಯ ವಿರುದ್ದ ಸಾಗುತ್ತೆವೋ ಅಷ್ಟೇ ಅನಾವುಥಗಳಿಗೆಅಪ್ಯ ಆಗ್ತಾ ಇದಿವಿ ಸ್ನೇಹಿತರೆ!!. ಸರಳ ಜೀವನ ನಡೆಸಿ ಸಾದ್ವಿಗಳ ಜೀವನ ನಮಗೆ ಆದರ್ಶ ಪ್ರಾಯವಾಗ ಬೇಕೇ ಒರತು, ಅಲ್ಪಜ್ಞರಾದ ಎಡಬಿಡಂಗಿ ತಾರೆಯರು-ತಳಕು-ಬಳಕು ಜನರು ಅಲ್ಲ.... ಯೋಚನೆಯ ಬೀಜ ಬಿತ್ತಿದ ಯೆಶುಗೆ ಸಹಭಾಶ್; ಯೋಚಿಸಿರಿ ಪ್ರಜ್ಞಾವಂತ ಗೆಳಯರೇ ..

    - ಅವಿನಾಶ್ ಈಶ್ವರ್ ಪಟೇಲ್

    ReplyDelete