Wednesday, September 9, 2009

ತೊಟ್ಟಿಲ ಹಾಡು (attitta nodadiru)

ಎಲ್ಲರ ಮನಸ್ಸನ್ನು ಮುಟ್ಟಿ , ಅಲ್ಲಿ ನೆಲೆಯೂರುವ ಶಕ್ತಿ ಸಂಗೀತಕ್ಕಿದೆ. ಆ ಸುಮದುರ ಸಂಗೀತದ ಜೊತೆ ಸುಂದರವಾದ ಸಾಹಿತ್ಯ ಇದ್ರೆ, ವಾಸ್ತವವನ್ನ ಮರೆಸಿ ಬೇರೊಂದು ಲೋಕಕ್ಕೆ ನಮ್ಮನ್ನ ಕೊಂಡೊಯ್ಯುತ್ತದೆ. ನರಸಿಂಹ ಸ್ವಾಮಿ ಯವರ ಸಾಹಿತ್ಯ, ಅಲ್ಲಿ ಅವರ ಕಲ್ಪನೆಗಳು ಎಲ್ಲರ ಮನಮುಟ್ಟುವುದರಲ್ಲಿ ಸಂದೇಹವೇ ಇಲ್ಲ.
ನಾನು ಮಾತ್ರ ತುಂಬ ಸಲ ಅವರ ಕವನಗಳ ಗುಂಗಿನಲ್ಲಿ ಮೈಮರೆತಿದ್ದೇನೆ. 'ತೊಟ್ಟಿಲ ಹಾಡು' ಅವರ ಸುಂದರ ಕವನಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು. ನಾನು ಮೊದಲು ಇದನ್ನ, ಬಿ ಕೆ ಸುಮಿತ್ರ ಅವರ ದನಿಯಲ್ಲಿ ಕೇಳಿದ್ದು. ಮೈಸೂರ್ ಅನಂತಸ್ವಾಮಿ ಅವರ ಸಂಗೀತದಲ್ಲಿ. ರಾತ್ರಿ ನಿದ್ದೆ ಬರದಿದ್ರೆ ಸಮ್ನೆ ಈ ಹಾಡನ್ನ ಕೇಳುತ್ತಾ ದಿಂಬಿಗೆ ಒರಗಿ, ನಿದ್ರೆಗೆ ಜಾರುವುದರಲ್ಲಿ ಯಾವುದೇ ಸಂದೇಹ ಬೇಡ. ಅಷ್ಟೆ ಅಲ್ಲ, ಚಿಕ್ಕವರಿದ್ದಾಗ ಅಮ್ಮ ಹಾಡಿದ ಲಾಲಿಯ ನೆನಪಾಗುತ್ತೆ, ಅಮ್ಮನ ಮಡಿಲಲ್ಲಿ ಮಲಗಿ ಮತ್ತೆ ಹಟ ಮಾಡಿದ ನೆನಪಾಗುತ್ತೆ. ಮತ್ತೆ ಮನೆಗೆ ಹೋಗಿ ಅಮ್ಮನ ಮಡಿಲಲ್ಲಿ ಮಲಗಬೇಕು ಅನ್ನಿಸುತ್ತೆ.


ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು;
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ.
ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು;
ನಿದ್ದೆ ಬರುವಳು ಕದ್ದು ಮಲಗು ಮಗುವೆ.

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ
ಮಲಗು ತೊಟ್ಟಿಲ ಸಿರಿಯೆ, ದೇವರಂತೆ;
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಹೋಗುವೆಯಂತೆ.

ಜೋ, ಜೂ, ಜೂ, - ಎಂದು ತೊಟ್ಟಿಲನು
ತೂಗುವೆನು; ಮಲಗೆನ್ನ ತುಂಟ ಮಗುವೆ;
ಜೋ, ಜೋ, ಜೋ, - ಎಂದು ತೊಟ್ಟಿಲನು
ತೂಗುವೆನು; ಮಲಗೆನ್ನ ಜಾಣ ಮಗುವೆ;

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ ಸುತ್ತ ನೆರೆದು.

ಮಕ್ಕಳಿಲ್ಲದ ಅಕ್ಕತಂಗಿಯರ ನಗುವಾಗಿ
ಚಕ್ಕಂದವಾಡಿ ಬಾ ಚಿಕ್ಕ ಮಗುವೆ;
ದೂರದೂರಿನ ಬನದ ಹೂದಡದ ಕೊಳಗಳಲಿ
ನೀರಾಟವಾಡಿ ಬಾ ಧೀರ ಮಗುವೆ.

ಜೋ, ಜೂ, ಜೂ, - ಎಂದು ತೊಟ್ಟಿಲನು
ತೂಗುವೆನು; ಮಲಗೆನ್ನ ತುಂಟ ಮಗುವೆ;
ಜೋ, ಜೋ, ಜೋ, - ಎಂದು ತೊಟ್ಟಿಲನು
ತೂಗುವೆನು; ಮಲಗೆನ್ನ ಜಾಣ ಮಗುವೆ;

ಬಣ್ಣಬಣ್ಣದ ಕನಸು ಕರಗುವುದು ಬಲುಬೇಗ;
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ,
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.

ಬೆಳಗಾಗ ನಿನ್ನ ಬಳಿ ಬಂದು 'ಕಂದಾ' ಎಂದು
ಕೂಗುವೆನು ಪಚ್ಚೆಕಣ್ಣತೆರೆವೆಯಂತೆ;
ನಿನ್ನ ನುಡಿಯಲಿ ನೀನೆ ಕಂಡ ಕನಸನೆಲ್ಲವನು,
ಅವರ ಕಿವಿಗಿಂಪಾಗಿ ನುದಿವೆಯಂತೆ.

ಜೋ, ಜೂ, ಜೂ, - ಎಂದು ತೊಟ್ಟಿಲನು
ತೂಗುವೆನು; ಮಲಗೆನ್ನ ತುಂಟ ಮಗುವೆ;
ಜೋ, ಜೋ, ಜೋ, - ಎಂದು ತೊಟ್ಟಿಲನು
ತೂಗುವೆನು; ಮಲಗೆನ್ನ ಜಾಣ ಮಗುವೆ;

ರಚನೆ: ಕೆ.ಎಸ್.ನರಸಿಂಹ ಸ್ವಾಮಿ