Tuesday, November 16, 2010

ಎಲ್ಲಿ ಜಾರಿತೋ ಮನವು

ಮಳೆ ಮೇಲ್ಛಾವಣಿಯನ್ನ ಬಿಡುವಿಲ್ಲದೆ ಬಡಿಯುತ್ತಿದೆ, ಯಾವುದೇ ಮಿಂಚು, ಗುಡುಗುಗಳಿಲ್ಲದ ಧಾರಾಕಾರ ಮಳೆ. ಮಳೆಯ ಈ ನಿನಾದ ತಡ ರಾತ್ರಿಯಲ್ಲಿ ಮಲಗಿದ್ದರು ಎಚ್ಚರವಾಗಿರುವಂತೆ ಮಾಡಿರುವುದು ಸುಳ್ಳಲ್ಲ. ಮಳೆಯಲ್ಲಿ ನಿಲ್ಲದೆಯೂ ನೆನೆಯುತ್ತಿರುವ ಅನುಭವ. ಅದೊಂತರ ಕೇಳಲಿಕ್ಕೆ ಹಿತವಾಗಿರುವ ಸದ್ದು.

ಹೌದು.... ಮಳೆಯೊಂದಿಗಿನ ನನ್ನ ಪ್ರೀತಿಗೆ ಬಹಳಷ್ಟು ಕಾರಣಗಳಿವೆ. ನನಗೆ ಬಿಟ್ಟು-ಬಿಡದೆ ಸುರಿವ ಮಳೆಯೊಂದಿಗೆ ಮೊದಲ ಗೆಳೆತನವಾದದ್ದು ಹನ್ನೆರಡನೆ ವಯಸ್ಸಿನಲ್ಲಿ. ವಿದ್ಯಾಭ್ಯಾಸದ ಸಲುವಾಗಿ ಪ್ರಕೃತಿಯ ಮಡಿಲಿಗೆ ನನ್ನ ಮೊದಲ ಪಯಣವದು. ಮಲೆನಾಡಿನ ವೈಭವವನ್ನೆಲ್ಲ ತನ್ನೊಳಗೆ ತುಂಬಿಕೊಂಡು ನಿಂತ ಸುಂದರ ತಾಣವದು.
ಮಲೆನಾಡಿನ ಸೌಂದರ್ಯ ಪದಗಳಿಗೆ ನಿಲುಕದ್ದು. ತಿಂದೋನೆ ಬಲ್ಲ ಬೆಲ್ಲದ ಸವಿಯ ಅನ್ನುವಂತೆ, ನಿಸರ್ಗ ಪ್ರೇಮಿಗಳಿಗೆ ಅದೊಂದು ಸ್ವರ್ಗ. ಪ್ರಕೃತಿಯಲ್ಲಿ ಆಗುವ ನಿತ್ಯದ ಬದಲಾವಣೆಗಳನ್ನ ಗಮನಿಸುತ್ತಾ ಹೋದಂತೆ, ಅದೊಂದು ಅಚ್ಚರಿಗಳ ಸಂತೆ. ಅಪರಿಮಿತ ಸೌಂದರ್ಯದೊಡನೆ ಮನಸ್ಸು ತೇಲುತ್ತಾ ಸಾಗುತ್ತದೆ.

ಮಲೆನಾಡಿನ ಮೊದಲ ಸೂರ್ಯೋದಯ ನೋಡಿದ ದಿನ ಇನ್ನು ನೆನಪಿದೆ. ಇಲ್ಲಿ ಅಡಗಿರಬಹುದಾದ ಇಂತಹ ಸೌಂದರ್ಯದ ಕಲ್ಪನೆ ಕೂಡ ನನಗಿರಲಿಲ್ಲ. ಸುತ್ತಲು ವಿಶಾಲವಾಗಿ ಹರಡಿದ್ದ ಹುಲ್ಲಿನ ಮೇಲೆ ಮುತ್ತಿನಂತೆ ಪೋಣಿಸಿದ್ದ ಇಬ್ಬನಿ ಹನಿಗಳು. ಆ ಹನಿಗಳ ಮೇಲೆ ಸೂರ್ಯನ ಕಿರಣದ ಪ್ರಥಮ ಚುಂಬನ ವಾತಾವರಣವನ್ನ ಮತ್ತಷ್ಟು ರಂಗೇರಿಸಿತ್ತು. ದಿನವನ್ನ ಆರಂಬಿಸುತ್ತಿದ್ದ ಹಕ್ಕಿಗಳ ಕಲರವ, ದುಂಬಿಗಳ ವೈಯ್ಯಾರ ಮತ್ತಷ್ಟು ಮೆರಗು ನೀಡಿತ್ತು. ಅಲ್ಲೆಲ್ಲ ನನ್ನನ್ನ ಅತ್ಯಂತ ಆಕರ್ಷಿಸಿದ್ದು "ಮುಟ್ಟಿದರೆ ಮುನಿ"(ಟಚ್ ಮೇ ನಾಟ್) ಅನ್ನುವ ಸಸ್ಯ. ಅದರ ಬಗ್ಗೆ ಕೇಳಿದ್ದೆನಾದರು ನೋಡಿರಲಿಲ್ಲ. ನಮ್ಮ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕೊದ್ದು ಕುಳಿತ ಅಪ್ಪಟ ಭಾರತೀಯ ನಾರಿಯಂತೆ ಕಂಡಿತ್ತು ನನಗೆ. ಅದಕ್ಕೆ 'ಮುನಿ' ಅಂತ ಯಾರು ಕರೆದರೋ ದೇವರೇ ಬಲ್ಲ. ಚುಮು-ಚುಮು ಚಳಿಗೆ ಮೈಚೆಲ್ಲಿ ಸ್ವಲ್ಪ ಸಮಯ ಅಲ್ಲೇ ನಿಂತಿದ್ದೆ.

ಇಂತಹ ಅನೇಕ ನೆನಪುಗಳು ಮಳೆಯೊಂದಿಗೆ ಬೆಸೆದುಕೊಂಡಿವೆ. ಈ ನೆನಪುಗಳಿಂದ ಹೊರ ಬಂದಾಗಲೇ ತಿಳಿದದ್ದು ಪಕ್ಕದಲ್ಲೇ ಗುನುಗುತ್ತಿದ್ದ ಬೇಂದ್ರೆ ಯವರ ಗೀತೆಯ ಸಾಲುಗಳು,
"’ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ....."
ಈ ಮಳೆ ಸ್ವಾತಿ ಮುತ್ತಿನೊಳಗೆ ತತ್ತಿ ಹಾಕುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನೊಳಗೆ ನೆನಪುಗಳನ್ನ ಬಿತ್ತುತ್ತಿದ್ದುದಂತು ಸತ್ಯ.

ಭಾವಗೀತೆ ಮತ್ತು ಮಳೆ ಸೇರಿದರೆ, ಉಪ್ಪು ಮತ್ತು ನೆಲ್ಲಿಕಾಯಿ ಬೆರೆತಂತೆ, ಸಮಯ ಹೋಗುವುದೇ ಗೊತ್ತಾಗಲ್ಲ. ಮಳೆ ಮುಂದುವರಿದಿತ್ತು, ನಾ ಮುನ್ನಡೆದಿದ್ದೆ, ಮತ್ತೆ ನೆನಪಿನೆಡೆಗೆ, ಅನಂತದೆಡೆಗೆ....!
ಪಕ್ಕದಲ್ಲೇ ಇದ್ದ ಮೊಬೈಲ್ನಲ್ಲಿ ಮುಂದಿನ ಗೀತೆ ಶುರುವಾಯ್ತು,

"ಎಲ್ಲಿ ಜಾರಿತೋ ಮನವು....."