Sunday, October 2, 2011

ಎದ್ದೇಳಿ...!

ಬನ್ನಿರಿ, ಬನ್ನಿರಿ, ನವ ಯುವಕರೇ ಬನ್ನಿ,
ಭವ್ಯ ಭಾರತದ ಉದಯಕ್ಕೆ ಅಣಿಯಾಗಿ ಬನ್ನಿ,
ಮತವೆಂಬ ಕಿಚ್ಚ, ಮೆಟ್ಟಿ ಮುಂದೆ ಬನ್ನಿ,
ಜಾತಿ ಧರ್ಮದ ಬೇಲಿ, ಕಿತ್ತೊಗೆದು ಬನ್ನಿ.

ಬಡವ ಬಲ್ಲಿದನೆಂಬ ಭೇದವಿಲ್ಲಿಲ್ಲ ಬನ್ನಿ,
ಆತ್ಮವಿಶ್ವಾಸದ ನಗೆಯ, ಬೀರುತ್ತ ಬನ್ನಿ,
ಸತ್ಯಕ್ಕೆ ಎಂದೆಂದೂ ಜಯವಿಹುದು ಬನ್ನಿ,
ನ್ಯಾಯದೇವತೆಯ ಕಣ್ಣ, ಕರಿ ಬಟ್ಟೆ ಬಿಚ್ಚೋಣ ಬನ್ನಿ.

ಬಿಸಿ ರಕ್ತದ ಯುವಕರೇ, ಭರವಸೆಯ ಹೊತ್ತು ಬನ್ನಿ,
ದುಷ್ಟ ಜನಗಳ, ಬಗ್ಗು ಬಡಿಯಲು ಬನ್ನಿ,
'ವಂದೇ ಮಾತರಂ' ಮಂತ್ರ, ಕೂಗುತ್ತ ಬನ್ನಿ,
ಮಾನವೀಯತೆ ಮೆರೆಯಲು, ಸಂತಸದಿ ಬನ್ನಿ.

ನೊಂದ ರೈತರೆ, ಆತ್ಮಹತ್ಯೆಯ ಮರೆತು ಬನ್ನಿ,
ಶೋಷಿತ ಕಾರ್ಮಿಕರೆ, ಎಚ್ಚೆತ್ತು ಬನ್ನಿ,
ಬ್ರಷ್ಟಾಚಾರ ರಹಿತ ದೇಶವ, ಕಟ್ಟುವ ಬನ್ನಿ,
ದುಷ್ಟ ಕೂಟವ ನಾವು, ಮಟ್ಟ ಹಾಕುವ ಬನ್ನಿ.

Wednesday, September 28, 2011

Engineering Student to a Professional Engineer.        We all join engineering with different reasons. For few engineering is a passion, for some it’s their childhood dream and in some cases it’s their parents dream. Whatever the case may be, “All our dreams can come true – if we have the courage to pursue them”. The future belongs to those who believe in the beauty of their dreams. Future doesn't look at what we were in the past; it’s our present dedication, present hard work and present passion towards achieving something.

        Engineering is all about applying ourselves and preparing for the expectations from the industries. Rapid technological changes, global competitions and work place innovations are demanding for higher skill levels from graduating engineers. Keeping us updated with recent industrial developments is most important. While learning something, it’s important to think of practical purpose behind it.

        “Progress” is uncompromisable necessity for an engineer. We started with few transistors on an IC and never have stopped even after billions on an IC. Also from bytes of memory devices to terabytes of storage on a small flash drive. Here nothing is magic or automatic about increasing memory capacity. Its the part of “road map” semiconductor industry has planned for many years. Similarly, its the “goal” we define for which leads our progress.

        As an engineering student, hard work and the application of mind in the concepts would be the best way for success. Studying the subject for the purpose of understanding than just for the sake of exams is the key. Your electives and the academic projects should be selected after clear thought process.

        There are many other things which you need to carry with you to your professional life,
                   Utilize the public networking (like internet, public seminars) for the best possible to update with recent developments.
                   Be a good team person.
                   Develop leadership qualities.
                   Find your flaws and fix them. Take the advice from your lectures in this case; they can be your best friends to help you.
                   Most importantly, be serious with your lab practicals.
                   Do your academic projects on your own. Don't take help from any consultancy, you learn very little there.
                   Make your summers productive.        In the final part of academics, obviously you have to look into requirements of recruitment. Your CV plays an important role. At least you should not make following mistakes while preparing a CV.
1.                  It should not be a cluttered CV. Don't put all the possible information in it. Recruiters don't want hectic searching. Make it user-friendly, so that they can find the information they are looking for in a glance.
2.                  Must avoid grammatical and spelling mistakes.
3.                  Don't give vague/unclear contact details. It is better if you’re the primary contact person in the details, so that the contact person doesn’t have to go through your parents or friends.
4.                  Keep your email address formal. Mostly the combination of your first and last name. Also it should be small and uncomplicated, to avoid any type mistakes by contact person.

        Analyze yourself properly and present it well. With all this in mind, enjoy your college days (I am not joking..!). College life is “Golden Life”.

                                                With Best Wishes,

                                                Yashwanth B N
                                                 2006 (E & C) Batch.
                                                 Senior Verification Engineer.
                                                 Microchip Technology India Pvt. Ltd.
                                                 : mail me @ yeshubn@gmail.com
 (I wrote this article to an Engineering college magazine)

ನೀರೆ

ಕಾಯಿಸಿದೆ, ಕಂಗೆಡಿಸಿದೆ,
ಕೊನೆಗೂ ಒಲಿದು ಬಂದೆ,
ಮುಡಿಯಿಂದ ಅಡಿವರೆಗೂ,
ತೋಯಿಸಿ ನೀ ಬಂದೆ,
ಝರಿಯಾಗಿ, ತೊರೆಯಾಗಿ,
ಅರಿದು ನೀ ಬಂದೆ.

ಹಸಿರಾಗಿ, ಚಿಗುರೆಲೆಯಾಗಿ,
ಎಲೆ ತುದಿಯ ಇಬ್ಬನಿಯಾಗಿ,
ನೀ ಮನತುಂಬಿದೆ,
 ಪುಟಿದು ಕುಣಿವ ಜಿಂಕೆಯ,
ಸಂತಸವಾಗಿ ನೀ ಬಂದೆ,
ಗರಿಗೆದರಿದ ನವಿಲ,
ಸೌಂದರ್ಯದಲಿ ನೀ ಕಂಡೆ.

ಮಣ್ಣ ಮನವ ಮುಟ್ಟಿ,
ಘಮವಾಗಿ ನೀ ಸುಳಿದೆ,
ಬಿಸಿಲ ಬೇಗೆಯ ನೀಗಿ,
ಧರೆಯ ಕೊಳೆಯ ತೊಳೆಯಲು,
ನೀ ಸುರಿದೆ.
ಜಗದ ನಗುವಾಗಿ ನೀ ಬಂದೆ,
ಓ ವರ್ಷದಾರೆ,
ಮುಂಗಾರಿನ ಮುನ್ನುಡಿಯಾಗಿ,
ನೀ ಬಂದೆ.

Sunday, June 19, 2011

ಬೆಟ್ಟದ ಜೀವ

ತುಂಬಾ ದಿನಗಳ ಹಿಂದೆ ಶಿವರಾಮ ಕಾರಂತರ, "ಬೆಟ್ಟದ ಜೀವ" ಅನ್ನುವ ಚಿಕ್ಕ ಕಾದಂಬರಿಯೊಂದನ್ನ ಓದಲು ಶುರುಮಾಡಿದ್ದೆ. ಅದು ಕಾರಂತಜ್ಜರ ಮೇರುಕೃತಿಗಳಲ್ಲಿ ಒಂದೆಂಬುದನ್ನ ಕೇಳಿದ್ದೆ. ಅದು ಸುಮಾರು ನೂರೈವತ್ತು ಪುಟಗಳ ಚಿಕ್ಕ ಪುಸ್ತಕವಾದರೂ ಅದನ್ನ ಓದಿ ಮುಗಿಸಲು ಇಪ್ಪತ್ತು ದಿನಗಳಿಗೂ ಹೆಚ್ಚು ಸಮಯವಾಯ್ತು. ಅಷ್ಟೊಂದು ಸಮಯ ಹಿಡಿಯಲು ನನ್ನ ಕೆಲಸದ ಒತ್ತಡವಾಗಲಿ, ಪುಸ್ತಕವಾಗಲಿ ಕಾರಣವಾಗಿರಲಿಲ್ಲ, ಬದಲಾಗಿ ಓದುತ್ತಾ ಹೋದಂತೆಲ್ಲ ಎಲ್ಲಿ ಬೇಗನೆ ಮುಗಿದು ಬಿಡುವುದೊ ಅನ್ನುವ ಬೇಸರ ಅಷ್ಟೇ. ಹಾಗಾಗಿಯೇ ಮುಂದುವರೆದಂತೆಲ್ಲ ದಿನಕ್ಕೆ ಎರಡು-ಮೂರು ಪುಟಗಳನ್ನ ಮಾತ್ರ ಓದಿ ಮುಚ್ಚಿಡುತ್ತಿದ್ದೆ. ಒಮ್ಮೆ ಓದಿ ಮುಗಿಸಿದ ನಂತರ ಮತ್ತೆರಡು ಸಲ ಓದಿದೆ. ಕಾರಂತರಲ್ಲಿ ನಮ್ಮನ್ನ ಬರಹಗಳ ಮೂಲಕ ಕಟ್ಟಿಹಾಕುವ ಮಹತ್ತರವಾದ ಶಕ್ತಿಯಿತ್ತು. ಅದನ್ನ ಈ ಪುಸ್ತಕದಲ್ಲಿ ಹೆಚ್ಚಾಗಿಯೇ ತುಂಬಿದ್ದರು.

"ಬೆಟ್ಟದ ಜೀವ", ಬೆಟ್ಟದ ಪರಿಸರದಲ್ಲಿ ತೋಟ, ಗದ್ದೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ ವೃದ್ದ ದಂಪತಿಗಳ ಕಥೆಯಿದು. ಕಥೆಯ ಆಳ, ಎತ್ತರ ತುಂಬಾ ಚಿಕ್ಕದಿದ್ದರು ಅದನ್ನ ಬಿಂಬಿಸಿದ್ದ ರೀತಿ ಕಾರಂತರ ವಿಶೇಷತೆಗೆ ಸಾಕ್ಷಿ. ಪಶ್ಚಿಮ ಘಟ್ಟಗಳ ನಡುವೆ, ಸುಬ್ರಮಣ್ಯ ದ ಸಮೀಪ, ಕುಮಾರ ಪರ್ವತದ ತಪ್ಪಲಲ್ಲಿ ಮನೆಬಿಟ್ಟಿರುವ ಮಗನ ಅಗಲಿಕೆಯನ್ನ ಭರಿಸಿಕೊಂಡು, ಬದುಕಿನೆಡೆಗೆ ಉತ್ಸಾಹವನ್ನ ಕಳೆದುಕೊಳ್ಳದೆ, "ಸುಖ" ಎನ್ನುವ ಪದಕ್ಕೆ ಬೇರೆಯದೇ ಅರ್ಥ ಕಂಡುಕೊಂಡು ಬದುಕುವ ವೃದ್ದರ ಜೀವನಗಾಥೆಯನ್ನ ಕಾರಂತರು ನಮ್ಮೆದುರು ಬಿಡಿಸಿಟ್ಟಿದ್ದ ಪರಿ ಅದ್ಭುತವಾಗಿತ್ತು. ನಿಸರ್ಗದ ಸೊಬಗನ್ನ, ಅಲ್ಲಿಯ ಜನರ ಬದುಕನ್ನ, ಕಣ್ಣಿಗೆ ಕಟ್ಟುವಂತೆ ಪುಸ್ತಕದಲ್ಲಿ ಹೇಳಲಾಗಿತ್ತು. ಓದುತ್ತಾ ಸಾಗಿದಂತೆಲ್ಲ ಘಟ್ಟಗಳ ನಡುವಿನ ಸೌಂದರ್ಯ ರಾಶಿ ಸವಿದ ಅನುಭವವಾಗುತ್ತಿತ್ತು.

ಈಗ ಪುಸ್ತಕದ ಬಗ್ಗೆ ಪೀಠಿಕೆ  ಹಾಕಿದ್ದಕ್ಕೆ ಕಾರಣ ಇದೆ. ಈ ಪುಸ್ತಕ ಚಲನಚಿತ್ರವಾಗಿದೆ. ಹೌದು, ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಮಾಡುವ ಮೊದಲು ಯಾರಾದರು ನನ್ನಲ್ಲಿ ಈ ಪುಸ್ತಕವನ್ನ ಆದರಿಸಿ ಚಲನಚಿತ್ರ ಮಾಡಬಹುದಲ್ವೆ ಅನ್ನುವ ಪ್ರಶ್ನೆ ಮಾಡಿದ್ದರೆ, ಖಂಡಿತ ಸಾದ್ಯವಿಲ್ಲ ಅನ್ನುವ ಉತ್ತರ ಬರುತ್ತಿತ್ತು. ಕಾರಣ ಕಾರಂತರು ವರ್ಣಿಸಿದ ರೀತಿಯಲ್ಲಿ ಪ್ರಕೃತಿಯನ್ನು ಮತ್ತು ಅಷ್ಟು ಚಿಕ್ಕ ಎಳೆಯಿರುವ ಕಥೆಯನ್ನ ತೆರೆಯ ಮೇಲೆ ಬಿಡಿಸಿದುವುದು ಸಾದ್ಯವಿಲ್ಲ ಅನ್ನುವ ಭಾವನೆ.

ಆದರೆ ಚಿತ್ರ ನೋಡಿ ಬಂದ ನಂತರ ನನ್ನ ಅನಿಸಿಕೆ ಬದಲಾಗಿದೆ. ಇಂತಹ ಅದ್ಬುತ ಕಾದಂಬರಿಯನ್ನ ಅದರ ಮೂಲಸ್ವರೂಪಕ್ಕೆ ತೊಂದರೆಯಾಗದಂತೆ ನಿರ್ದೇಶಕ ಶೇಷಾದ್ರಿ ತೋರಿಸಿದ್ದಾರೆ. ಅವರ ಈ ಪ್ರಯತ್ನ ಮೆಚ್ಚುವಂತದ್ದು. ಬೆಂಗಳೂರಿನ ಕಾಂಕ್ರಿಟ್ ಕಾಡನ್ನ ಮರೆತು, ನಮ್ಮ ಪಶ್ಚಿಮ ಘಟ್ಟಗಳ ಸುಂದರ ಕಾಡಿನೊಂದಿಗೆ ಮೈಮರೆತು ವಿಹರಿಸುವ ತವಕವಿದ್ದವರು ನೋಡಲೇಬೇಕಾದ ಚಿತ್ರವಿದು. ಚಿತ್ರದ ಕತೆ ಚಿಕ್ಕದಾದುದರಿಂದ ಸ್ವಲ್ಪ ಮಂದಗತಿಯಲ್ಲಿ ಸಾಗಿದರು, ತೆರೆಯ ಮೇಲೆ ಕಾಣುವ ಪ್ರಕೃತಿ ಸೌಂದರ್ಯದ ಶ್ರೀಮಂತ ದೃಶ್ಯಗಳು ಎಲ್ಲಿಯೂ ಬೇಸರವೆನಿಸದಂತೆ ನೋಡಿಕೊಳ್ಳುತ್ತವೆ. ಅನಂತ ಅರಸ್ ಅವರ ಛಾಯಾಗ್ರಹಣ ಚಿತ್ರದ ಯಶಸ್ಸಿನಲ್ಲಿ ಪ್ರಮುಕ ಪಾತ್ರ ವಹಿಸಿದೆ. ಗೊಪಲಯ್ಯನ ಪಾತ್ರದಲ್ಲಿ ಧತ್ತಾತ್ರೆಯ ಅವರು ವಯಸ್ಸು ಮರೆತು ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ. ಮಚ್ಚು-ಲಾಂಗುಗಳು ಗುಡುಗುವ ಇವತ್ತಿನ ಚಲನಚಿತ್ರಗಳ ಮದ್ಯೆ "ಬೆಟ್ಟದ ಜೀವ" ಚಿತ್ರ ವಿಶೇಷವಾಗಿ ಕಾಣುತ್ತದೆ. ಆದರೆ ಕೇವಲ ಎರಡು ಚಿತ್ರಮಂದಿರಗಳಲ್ಲಿ ಮಾತ್ರ ತೆರೆ ಕಂಡಿರುವುದು ಬೇಸರದ ಸಂಗತಿ. ಅದಕ್ಕೆ ಜನರ ಅಭಿರುಚಿಯ ಬಗ್ಗೆ ನಿರ್ಮಾಪಕರಿಗೆ ಇರುವ ಅಳುಕು ಕಾರಣವಿರಬಹುದು. ಅಪರೂಪವಾಗಿರುವ ಇಂತಹ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎನ್ನುವ ಆಶಯ ನಮ್ಮದು.

Sunday, February 6, 2011

ಶರಾವತಿ ಕಣಿವೆ ರಹಸ್ಯ.....!

ನನ್ನ ಹಿಂದಿನ ಪ್ರವಾಸದ ನಂತರ ಒಂದು ತಿಂಗಳ ಬಿಡುವಾಗಿತ್ತು. ಸಮಯಕ್ಕೆ ಸರಿಯಾಗಿ ನನ್ನ ಬೆಂಗಳೂರು ಸ್ನೇಹಿತರು 'ಚಾರಣ'ಕ್ಕೆ ತಯಾರಿ ನಡೆಸಿದ್ರು. ಅಲ್ಲಿಂದ ೧೪ ಜನ ರೆಡಿಯಾದ್ರು, ಮಣಿಪಾಲ್ ದಿಂದ ನನ್ನೊಡನೆ ಬರಲು ತಯಾರಾದದ್ದು ಮೂರು ಜನ, ಕೊನೆಯಲ್ಲಿ ಹೋದದ್ದು ಒಬ್ಬನೇ. ಚಾರಣವಾದ್ರು ಎಲ್ಲಿಗೆ ಅಂದುಕೊಂಡ್ರ, ನನ್ನ ಮೆಚ್ಚಿನ ತಾಣವಾದ ಶರಾವತಿ ಕಣಿವೆಗೆ.


ಎರಡು ದಿನಗಳ ಪ್ರವಾಸ, ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಸಂಜೆಯವರೆಗೆ. ಎಲ್ಲರು ಜೋಗದಲ್ಲಿ ಸೇರುವುದೆಂದು ನಿರ್ದಾರವಾಯ್ತು. ನನಗೆ ಮಣಿಪಾಲ್ ನಿಂದ ರಾತ್ರಿ ಬಸ್ ಸಿಗದ ಕಾರಣ ಗುರುವಾರ ರಾತ್ರಿಯೇ ಜೋಗ ತಲುಪಿ ಅಲ್ಲಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡೆ. ಬೆಳಗ್ಗೆ ಏಳು ಗಂಟೆಗೆ ಬೆಂಗಳೂರಿನ ಸ್ನೇಹಿತರು ಬಂದು ತಲುಪಿದರು. ನಾವು ಸ್ಥಳಿಯರೊಬ್ಬರನ್ನ ಗೈಡ್ ಮಾಡುವಂತೆ ಕೇಳಿದ್ದೆವು. ನಮ್ಮ trek ಪ್ರಾರಂಭವಾಗಬೇಕಿದ್ದ ಸ್ಥಳ 'ಕಟ್ಟಿನ ಕಾರು' ಅನ್ನುವ ಸುಮಾರು ಹತ್ತು ಮನೆಗಳಿರುವ ಚಿಕ್ಕ ಊರು. ಜೋಗದಿಂದ ೩೫ ಕಿ. ಮೀ., ಭಟ್ಕಳ ದಾರಿಯಲ್ಲಿತ್ತು. ಎರಡು omini ಯಲ್ಲಿ ಗೈಡ್ ಮನೆ ತಲುಪಿದೆವು. ನಮ್ಮ ಬೆಳಗ್ಗಿನ ಪ್ರಾಥರ್ವಿದಿಗಳನ್ನೆಲ್ಲ ದಾರಿಯಲ್ಲೇ ಸಿಗುವ ಹಳ್ಳದಲ್ಲಿ ಮುಗಿಸಬೇಕಿತ್ತು. ಮನೆ ತಲುಪಿದಾಗ ಸ್ಥಳೀಯ ಶೈಲಿಯ ಉಪ್ಪಿಟ್ಟು, ಅವಲಕ್ಕಿ ತಯಾರಾಗಿತ್ತು. ತಿಂಡಿ ಮುಗಿಸಿ ಹೊರಟು ನಿಂತೆವು, ಎಲ್ಲರಲ್ಲೂ ಪಶ್ಚಿಮಘಟ್ಟಗಳ ಹಸಿರು ರಾಶಿಯ ಮಧ್ಯೆ ಬೆರೆತು ಹೋಗುವ ಕಾತರ.

ಇಲ್ಲಿಂದ ಮುಂದಿನದೆಲ್ಲ ಎರಡು ದಿನಗಳ ಕಾಲ ಪ್ರಕೃತಿಯೊಡನೆ ನಮ್ಮ ಸರಸ.  ನಗರದ ಜಂಜಾಟಗಳನ್ನ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡುವ ನಮ್ಮ ನಿತ್ಯದ ಬದುಕನ್ನ, ನಾವೇ ಆರಿಸಿ ಕಳಿಸಿದ ನಿಷ್ಟೆಯಿಲ್ಲದ ರಾಜಕೀಯ ಪ್ರಾಣಿಗಳನ್ನ ತೆಗಳುತ್ತ ದಿನದೂಡುವುದಕ್ಕೆ ಅಲ್ಪ ವಿರಾಮವನ್ನಿಟ್ಟು ಕಾಡಿನೆಡೆಗೆ ಹೆಜ್ಜೆ ಹಾಕತೊಡಗಿದೆವು. ನಿಮಿಷಕ್ಕೊಮ್ಮೆ ಕುಯಿಗುಡುವ ಜಂಗಮ ಗಂಟೆಗಳಿಲ್ಲ(ಮೊಬೈಲ್), ಅಲ್ಲಿ ನಾವು, ನಮ್ಮ ಗೈಡ್ ಮತ್ತು ಇಬ್ಬರು ಅಡುಗೆಯವರು ಮಾತ್ರ.

ಮೊದಲ ದಿನ......
ಅಂದಿನ ನಮ್ಮ ಪಯಣ ಗೂಡನ ಗುಂಡಿ/ಬೆಳ್ಳಿ ಗುಂಡಿ ಅನ್ನುವ ಪ್ರದೇಶಕ್ಕೆ. ಅಲ್ಲಲ್ಲಿ ಸಿಗುವ ಚಿಕ್ಕ ಬುಡಕಟ್ಟು ಜನಗಳ ಜೋಪಡಿಗಳನ್ನ ದಾಟಿ ಕಾಡನ್ನ ಪ್ರವೇಶಿಸಿದೆವು. ನಮ್ಮ ಗೈಡ್ ದಾರಿ ತೋರುತ್ತ ಮುಂದೆ ಸಾಗುತ್ತಿದ್ದರೆ, ನಾವು ಮದ್ಯೆ ಮತ್ತು ನಮ್ಮ ಅಡುಗೆಯವರು ಕೊನೆಯಲ್ಲಿ. ದಿನಂಪ್ರತಿಯ ಓಡಾಟಗಳಿಲ್ಲದ ಕಾಡು ಜಾಗವದು. ಅಷ್ಟೇನೂ ಕ್ಲಿಷ್ಟಕರವಾದುದಲ್ಲ, ಎಲ್ಲೆಡೆ ಸಸ್ಯರಾಶಿ ಕಂಗೊಳಿಸುತ್ತದೆ. ಕೆಲವೊಮ್ಮೆ ಮುಂದಿನವರು ಹೋದ ದಾರಿಯನ್ನ ಬಿಟ್ಟು ಬೇರೆ ದಾರಿಯಲ್ಲಿ ಹೋಗಿ ಕೈಕಾಲು ತರಚಿಕೊಳ್ಳುತ್ತ, ಬೂಟಿನ ಸಮೇತ ನಿರಿಗೆ ಜಿಗಿಯುತ್ತ ಸಾಗುತ್ತಿದ್ದೆವು.


ನಡೆದಂತೆಲ್ಲ ಕಾಣುತ್ತಿದ್ದ ವಿವಿದ ರೀತಿಯ ಸಸ್ಯ ಪ್ರಭೇದಗಳು ಬಿ.ಜಿ.ಎಲ್ ಸ್ವಾಮಿಯವರ "ಹಸುರು ಹೊನ್ನು" ಪುಸ್ತಕದ ಪುಟಗಳನ್ನ ಕಣ್ಣೆದುರಿಗೆ ತಂದಿರಿಸುತ್ತಿತ್ತು. ಅವರ ಪುಸ್ತಕ ಒಂದರಲ್ಲಿ ಓದಿದ ನೆನಪು, ಅವರ ಪ್ರಕಾರ ಇಂಗ್ಲೆಡಿನ ಇಂಥಹ ಕಾಡುಗಳಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಸುಮಾರು ಮೂರೋ-ನಾಲ್ಕೋ ಮರದ ಸ್ಪೀಷಿಸುಗಲಿರುತ್ತವೆ. ಅದೇ ರೀತಿ ಅಮೇರಿಕಾದ ಅಪಲೇಚಿಯನ್ ಕಾಡುಗಳಲ್ಲಿ ಸುಮಾರು ಇಪ್ಪತೈದು ಸ್ಪೀಷಿಸುಗಳು ಒಂದು ಎಕರೆ ವಿಸ್ತೀರ್ಣದಲ್ಲಿ ಕಂಡುಬರುತ್ತವೆ. ಆದರೆ ನಮ್ಮ ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಸುಮಾರು ಎಂಬತ್ತು ಮರ ಸ್ಪೀಷಿಸುಗಳು ಕಂಡುಬರುತ್ತವೆ( ಅವರ ಮತ್ತು ಅವರ ವಿಧ್ಯಾರ್ಥಿಗಳ ಸ್ಥೂಲ ಸರ್ವೇ ಪ್ರಕಾರ). ನಮಗೆ ಬೇರೆ-ಬೇರೆ ರೀತಿಯ ಮರಗಳನ್ನ ಗುರುತಿಸುವಷ್ಟು ಸಸ್ಯಶಾಸ್ತ್ರದ ಜ್ಞಾನವಿಲ್ಲದಿದ್ದರು ವಿವಿದ ರೀತಿಯ ಮರಗಳನ್ನ ಕಂಡು ಆನಂದಿಸಿದೆವು.


ಈಗೆ ಯೋಚನೆಯಲ್ಲಿ ಮುಳುಗಿ, ಮಾತಾಡದೆ ಎಲ್ಲಿಯಾದರೂ ಕಾಡುಪ್ರಾಣಿಗಳು ಕಾಣಿಸಬಹುದು ಎಂಬ ಆಸೆಯಿಂದ ಸುಮಾರು ನಾಲ್ಕು ಕಿ. ಮೀ. ನಡೆದು ಬೆಳ್ಳಿಗುಂಡಿ ಜಲಪಾತ ತಲುಪಿದೆವು. ಅದ್ಬುತ ಪ್ರದೇಶವದು, ಸುಂದರ ಜಲಪಾತ. ಒಂದು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಆಡಿದೆವು. ಅಷ್ಟರಲ್ಲಿ ನಮ್ಮ ಅಡುಗೆಯವರು ಊಟ ತಯಾರು ಮಾಡಿದ್ದರು. ಧಣಿವಿಗೆ ಸರಿಯಾಗಿ ಮಸ್ತ್ ಊಟ ಮುಗಿಸಿ ಅಲ್ಲಿಂದ ಹೊರಡುವಾಗ ಮದ್ಯಾಹ್ನ ೨ ಗಂಟೆ.


ಮುಂದಿನ ದಾರಿಯುದ್ದಕ್ಕೂ ಅದುಗೆಯವರೊಂದಿಗೆ ನಾನು, ನನ್ನ ಕೆಲವು ಸ್ನೇಹಿತರು ಮಾತಿಗಿಳಿದೆವು. ಅವರು ತಮ್ಮ ದಿನಚರಿಯ ಬಗ್ಗೆ, ಕಾಡುಪ್ರಾಣಿಗಳ ಬಗ್ಗೆ, ಅವರು ಜೇನು ಕೀಳುವ ಬಗ್ಗೆ ನಮಗೆ  ಅವರ ಅನುಭವಗಳನ್ನ ಹಂಚಿಕೊಳ್ಳುತ್ತ ಸಾಗಿದರು. ಅಲ್ಲಲ್ಲಿ ವಿದವಾದ ಮತ್ತು ವಿಚಿತ್ರ ರೀತಿಯ ಸಸ್ಯಗಳನ್ನ, ಮರಗಳನ್ನ ತೋರಿಸುತ್ತಾ ಅವುಗಳ ವಿಶೇಷತೆಯನ್ನ ವಿವರಿಸುತ್ತ ನಡೆದಿರುವಾಗ ಕಪ್ಪು ಬಣ್ಣದ, ದೊಡ್ಡ ಗಾತ್ರದ ಪ್ರಾಣಿಯೊಂದು ನಮಗೆ ಸ್ವಲ್ಪ ದೂರದಲ್ಲೇ ಓಡಿ ಹೋಯ್ತು. ಕೆಲವರು ಅದು ಕಾಡು ಹಂದಿಯೆಂದು, ಮತ್ತೆ ಕೆಲವರು ಕರಡಿಯೆಂದು ಭಾವಿಸಿ ಸಂತೋಷಪಟ್ಟೆವು, ಯಾರಿಗೂ ಸರಿಯಾಗಿ ಕಂಡಿರಲಿಲ್ಲ.

ಆಗೊಂದು ಈಗೊಂದು ಬೆಡಗು ಬಣ್ಣದ ಪಕ್ಷಿಗಳು ಕಾಣಸಿಗುತ್ತಿದ್ದವು. ಅಲ್ಲಲ್ಲಿ ಪಂಚರಂಗಿ ಪತಂಗಗಳು ನಮಗೆ ಮುತ್ತಿಕ್ಕಲು ಹತ್ತಿರ ಬಂದವರಂತೆ ಬಂದು ಮಾಯವಾಗಿಬಿಡುತ್ತಿದ್ದವು. ತರಗೆಲೆಗಳು ಗಾಳಿಯ ಜೊತೆ ಸೇರಿ ನಿನಾದ ಸೃಷ್ಟಿಸಿದ್ದವು. ಎತ್ತ ತಿರುಗಿದರು ಮರಗಳು, ಮತ್ತಷ್ಟು ಮರಗಳು. ಚಿಕ್ಕ ಸಸಿಗಳಿಂದ ಹಿಡಿದು ದೊಡ್ಡ ಹೆಮ್ಮರಗಳ ತನಕ ತಲೆಯೆತ್ತಿ ನಿಂತಿವೆ.


ಸಂಜೆಯೊತ್ತಿಗೆ ಶರಾವತಿ ಕಣಿವೆಯ ವೀಕ್ಷಣಿಯ ಸ್ಥಳವೊಂದನ್ನ ಬಂದು ತಲುಪಿದೆವು.ಕಣ್ಣು ಆಯಿಸಿದಷ್ಟು ಬೆಟ್ಟ ಗುಡ್ಡಗಳು. ದೂರದ ಬೆಟ್ಟವೊಂದರಲ್ಲಿ ಬೀಳುತ್ತಿದ್ದ ಜಲಪಾತ, ಬೆಟ್ಟ ಸುತ್ತಿಕೊಂಡಿರುವ ಜನಿವಾರದಂತೆ ಗೋಚರಿಸುತ್ತಿತ್ತು. ಆಗೆಯೇ ಮುಂದುವರೆದು ನಮ್ಮ ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತ, ಗುಡ್ಡಗಳಾಚೆ ಮರೆಯಾದ ಸೂರ್ಯನನ್ನ ಅಂದಿಗೆ ಬೀಳ್ಕೊಟ್ಟು ಏಳು ಗಂಟೆಯಷ್ಟರಲ್ಲಿ ಗೈಡ್ ಮನೆ ತಲುಪುವಷ್ಟರಲ್ಲಿ ಬಿಸಿ-ಬಿಸಿ ಕಾಫಿ, ಚಹಾ ಮತ್ತು ಭಜಿ ತಯಾರಾಗಿತ್ತು. ಅವರ ಮನೆಯಲ್ಲಿ ತಿಂಗಳ ಹಿಂದೆ ಮಳೆಗಾಲದ ಗುಡುಗು ಸಿಡಿಲಿಗೆ ಶಾರ್ಟ್ ಆಗಿ ಹೋಗಿದ್ದ ವಿದ್ಯುತ್ ಇನ್ನು ಸರಿಯಾಗಿರಲಿಲ್ಲ. ಮನೆಯ ಮುಂದೆಯೇ ಕಟ್ಟಿಗೆ ಸೇರಿಸಿ ಬೆಂಕಿ ಮಾಡಲಾಯಿತು. ಅದರ ಸುತ್ತ ಕುಳಿತು ಊಟ ತಯಾರಗುವವರೆಗೆ ಅಂತ್ಯಾಕ್ಷರಿಯಲ್ಲಿ ಕಾಲಕಳೆದೆವು. ಊಟದ ನಂತರ ಎಲ್ಲರು ನಿದ್ದೆಗೆ ಶರಣಾದರೆ, ನಾವು ನಾಲ್ಕೈದು ಜನ ಕಾಡಿನಲ್ಲಿ ಪ್ರಾಣಿಗಳನ್ನ ಹುಡುಕಲು ಹೊರಟು ನಿಂತೆವು. ಗೈಡ್ ಪ್ರಕಾರ ಆ ಸಮಯದಲ್ಲಿ ಕಾಡು ಪ್ರಾಣಿಗಳು ಕಾಣುವುದಿಲ್ಲವಂತೆ, ಆದರು ಪ್ರಯತ್ನ ಮಾಡಿದೆವು. ಕಾಡುಪಾಪ ದಂತ ಒಂದು ಪ್ರಾಣಿ ಮರದ ಮೇಲಿಂದ ಇಣುಕು ಹಾಕಿದ್ದು ಬಿಟ್ಟರೆ ಬೇರೇನೂ ಕಾಣಲಿಲ್ಲ. ಕಾಡು ರಸ್ತೆಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಓಡಾಡುವ ಅನುಭವ ಸಕತ್ ಖುಷಿ ಕೊಡ್ತು. ಮಲಗುವ ಮೊದಲು ನಮ್ಮ ಗೈಡ್, ಬೆಳಗ್ಗೆ ಬೇಗ ಎದ್ರೆ ಕಾಡಲ್ಲಿ ಹೋಗಿ ಪ್ರಾಣಿಗಳನ್ನ ಹುಡುಕಬಹುದು ಅಂದ್ರು. ಅದೇ ಗುಂಗಿನಲ್ಲಿ, ಮನೆಯಂಗಳದಲ್ಲಿ, ಕೋಟಿ ತಾರೆಗಳ ನೋಡುತ್ತಾ ನಿದ್ರೆಗೆ ಜಾರಿದೆವು.


ಅಷ್ಟೇನೂ ನಿದ್ದೆ ಹತ್ತಲಿಲ್ಲ. ಆಗಾಗ ಕೂಗುವ ಕಾಡು ಪ್ರಾಣಿಗಳ ವಿಚಿತ್ರ ಕೂಗು. ಅದನ್ನ ಅನುಕರಿಸಿ ಪ್ರತಿಕ್ರಿಯೆಯಂತೆ ಕೂಗುವ ಹಳ್ಳಿಯ ಬೀದಿ ನಾಯಿಗಳು. ಒಂದೆರಡು ಮಗ್ಗುಲು ಬದಲಿಸುವಷ್ಟರಲ್ಲಿ ಬೆಳಗಿನಜಾವ ನಾಲ್ಕು ಗಂಟೆಯಾಗಿತ್ತು. ಎದ್ದು ತಯಾರಾಗಿ ನಾವು ನಾಲ್ಕು ಜನ ಗೈಡ್ ಜೊತೆ ಕಾಡಿನೊಳಗೆ ಕಾಲಿಟ್ಟೆವು. ನಂತರದ್ದೆಲ್ಲ ವಿಸ್ಮಯ ಪ್ರಪಂಚ. ನಿರ್ದಿಷ್ಟ ದಾರಿಯಿಲ್ಲದ ಕಾಡಿನ ತೊರೆ, ಪೊದೆಗಳ ನಡುವೆ ಟಾರ್ಚ್ ಇಡಿದು ಸುತ್ತಿದೆವು. ಕಾಡು ಬೆಕ್ಕು ಬಿಟ್ಟರೆ ಬೇರಾವ ಪ್ರಾಣಿಯು ಕಾಣದಿದ್ರು, ಅದೊಂದು ಅವಿಸ್ಮರಣೀಯ ನೆನಪು. ಬೆಳಗಾಗುವವರೆಗೆ  ಗುಡ್ಡದ ತುದಿಯೊಂದನ್ನ  ಏರಿ ಕುಳಿತು ಸೂರ್ಯೋದಯದ ರಂಗಿನ ಆಗಸವನ್ನ ನೋಡಿ ಹಿಂತಿರುಗತೊಡಗಿದೆವು. ಕಾಡು ಮದ್ಯದ ಮರವೊಂದರಲ್ಲಿ ಇಪ್ಪತ್ತಕ್ಕೂ ಹೆಚ್ಚು 'ಹಾರ್ನ್ ಬಿಲ್' ಪಕ್ಷಿಗಳು ಕಾಣಿಸಿದವು. ಅಷ್ಟೊಂದು ಹಾರ್ನ್ ಬಿಲ್ ಗಳನ್ನ ಒಟ್ಟಿಗೆ ನೋಡಿದ್ದು ಅದೇ ಮೊದಲು. ಮನೆ ತಲುಪಿ ತಿಂಡಿ ಮುಗಿಸಿ ಅಂದಿನ ಚಾರಣಕ್ಕೆ ಹೊರಟು ನಿಂತೆವು.

ಎರಡನೇ ದಿನ....
ಅಂದಿನ ನಮ್ಮ ಚಾರಣ 'ಬಸವನ ಬಾಯಿ' ಅನ್ನುವ ಪ್ರದೇಶಕ್ಕೆ. ಅಂದು ಸಂಜೆ ೫ಕ್ಕೆ ಬಸ್ ಹಿಡಿಯಬೇಕಾದ ಅನಿವಾರ್ಯತೆ ಇದ್ದುದರಿಂದ ಗೈಡ್ ನಮ್ಮನ್ನ ಯಾವುದೋ ಕಾಲು ದಾರಿಯಲ್ಲಿ ಕರೆದುಕೊಂಡು ಹೋಗುವ ನಿರ್ದಾರ ಮಾಡಿದರು. ಅದು ಸುಮಾರು ಏಳು ಕಿ.ಮೀ. ನಡಿಗೆ. ಅವತ್ತು ನಮ್ಮೊಡನೆ ಇದ್ದುದು ಗೈಡ್ ಮಾತ್ರ, ಅಡುಗೆಯವರು ಬೇರೆ ದಾರಿಯಲ್ಲಿ ಮೊದಲೇ ಜಾಗ ತಲುಪಿದ್ದರು. ಗೈಡ್ ಮುಂದೆ ನಡೆದಂತೆಲ್ಲ ಅವರನ್ನ ಹಿಂಬಾಲಿಸಬೇಕಿತ್ತು. ಆದರು ಒಮ್ಮೆ ಯಡವಟ್ಟು ಮಾತ್ರ ಆಯ್ತು,  ನಾನು, ಶಾರಿ, ಸುನಿಲ್ ಕೊನೆಯಲ್ಲಿದ್ವಿ. ದೂರದ ಮರವೊಂದರಲ್ಲಿ ' ಹಾರ್ನ್ ಬಿಲ್' ಕಾಣಿಸ್ತು. ಅದನ್ನ ಸುನಿಲ್ ರಿಗೆ ತೋರಿಸಲಿಕ್ಕೆ ಅಂತ ಸ್ವಲ್ಪ ಕಾಡಿನ ಒಳ ಹೊಕ್ಕು ಹೊರ ಬರುವಷ್ಟರಲ್ಲಿ ಎಲ್ಲರು ಅಲ್ಲಿಂದ ಹೊರಟೂಗಿದ್ರು. ಮುಂದಕ್ಕೆ ಮೂವರು ದಾರಿ ತಪ್ಪಿದೆವು. ಎಷ್ಟು ಕೂಗಿದರು ಯಾವುದೇ ಪ್ರತಿಕ್ರಿಯೆ ಇಲ್ಲ. ನಮ್ಮ ಕೂಗು ಕೇಳಿ ಅಲ್ಲೇ ಪಕ್ಕದ ಪೋದೆಯಲ್ಲಿದ್ದ ಎರಡು ಜಿಂಕೆಗಳು ತಮ್ಮ ಪುಟ್ಟ ಮರಿಯೊಂದಿಗೆ ಚಂಗನೆ ಹಾರಿ ಪೊದೆ ಬದಲಿಸುತ್ತ ಓಡಿ ಹೋದವು. ದಾರಿಯಂತೆ ಕಂಡದ್ದನ್ನೆಲ್ಲ ಅನುಸರಿಸುತ್ತ ಮುಂದೆ ಸಾಗುತ್ತಿದ್ದೆವು. ಸ್ವಲ್ಪ ಸಮಯದ ನಂತರ ನಮ್ಮ ಗೈಡ್ ನಮ್ಮನ್ನ ಹುಡುಕಿಕೊಂಡು ವಾಪಸ್ ಬಂದ್ರು. ಮತ್ತೆ ಎಲ್ಲೂ ದಾರಿ ತಪ್ಪಲಿಲ್ಲ, ಈ ಬಾರಿ ತಪ್ಪಿದ್ದರೆ ಕಂಡಿತ ಸಿಗುತ್ತಿರಲಿಲ್ಲ. ಮುಂದಿನದೆಲ್ಲ ಭಯಾನಕವಾದ ಕಾಡು, ಎಲ್ಲಿಯೂ ದಾರಿಯಿಲ್ಲ. ಗೈಡ್ ಮುಂದೆ ದಾರಿ ಮಾಡಿಕೊಳ್ಳುತ್ತ ನಡೆದಂತೆ ಅವರನ್ನ ಹಿಂಬಾಲಿಸಿದೆವು. ಆಗಾಗ ತುರುಚಲು ಗಿಡಗಳು ನಮ್ಮ ರಕ್ತದ ರುಚಿ ನೋಡುತ್ತಿದ್ದವು. ಅಂತೂ ದಟ್ಟ ಕಾಡಿನ ಮದ್ಯೆ ಇದ್ದ 'ಬಸವನ ಬಾಯಿ' ಅನ್ನುವ ಚಿಕ್ಕ ಗುಡಿಯನ್ನ ತಲುಪಿದಾಗ ಮದ್ಯಾಹ್ನ ದ ಸಮಯ.
  

ಅಲ್ಲಿಯೇ ಪಕ್ಕದಲ್ಲೇ ಇದ್ದ ತಂಪಾದ ಜಲಪಾತದಲ್ಲಿ ಸಮಯ ಕಳೆದು, ಮದ್ಯಾಹ್ನ ದ ಬಾಳೆ ಎಲೆ ಊಟ ಮುಗಿಸಿ, ಬೇರೊಂದು ದಾರಿಯಿಂದ ವಾಪಾಸಾದೆವು. ಅಲ್ಲಲ್ಲಿ ಸಮಯ ಕಳೆಯುತ್ತಾ, ಸಂಜೆಯೊತ್ತಿಗೆ ಬಸ್ ಹಿಡಿಯುವ ಜಾಗಕ್ಕೆ ಬಂದ್ರೆ ನಿರಾಸೆ ಕಾದಿತ್ತು. ಎರಡು ದಿನ ಯಾವುದೇ ಜಂಜಾಟವಿಲ್ಲದೆ ಕಳೆದ ನಮಗೆ ಆಗಲೇ ತಿಳಿದದ್ದು, ರಾಜ್ಯಪಾಲರ ವಿರುದ್ದ ಆಡಳಿತ ಪಕ್ಷದವರೇ ಕರೆದಿದ್ದ ಕರ್ನಾಟಕ ಬಂದ್. ರಾತ್ರಿ ಒಂಬತ್ತಕ್ಕೆ ಮಣಿಪಾಲ್ ತಲುಪಬೇಕಿದ್ದ ನಾವು, ಹೇಗೋ ಸರ್ಕಸ್ ಮಾಡಿ ಬಂದು ತಲುಪಿದಾಗ ನಡು ರಾತ್ರಿ ೨:೩೦ ರ ಸಮಯ. ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತ, ಅಂತೂ ಮನೆ ತಲುಪಿದೆವು. ನನ್ನ ಸ್ನೇಹಿತರು ಸಾಗರದಿಂದ ಬೆಂಗಳೂರು ಬಸ್ ಹತ್ತಿದರು.

ಇಲ್ಲಿ ತಲುಪಿದರು ನಮ್ಮ ಮನಸ್ಸೆಲ್ಲ ಕಾಡಿನಲ್ಲಿಯೇ ಇತ್ತು. ಪ್ರಕೃತಿಯ ಸೌದರ್ಯ ಕಣ್ಣುಗಳಲ್ಲಿ ತುಂಬಿಕೊಂಡಿತ್ತು. ಅದು ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುವ ವನಸಿರಿ. ಮತ್ತೆ ಭೇಟಿಕೊಡಲು ಕಾಯುತ್ತಿದ್ದೇನೆ.....!