Wednesday, August 19, 2009

ಮನ ತೋಯಿಸುವ ಮಳೆ.....!!!

ಮನಸ್ಸಿನ ಸಂತೋಷಕ್ಕೆ ಸಾವಿರ ಕಾರಣಗಳು, ದುಃಖಕ್ಕೆ ಕೂಡ. ಓಡುವ ಮನಸ್ಸಿಗೆ ಲಗಾಮು ಹಾಕುವವರರು? ಹುಟ್ಟುವ ಭಾವನೆಗಳನ್ನ ತಡೆಯುವವರಾರು? ಮನಸ್ಸು ಒಂದು ಕರಿ ಚಿಟ್ಟೆಯಂತೆ, ಮುಟ್ಟುವ ಹೂವುಗಳು ನೂರು, ಹುಟ್ಟುವ ಭಾವನೆಗಳು ನೂರು, ಮಳೆಯಲ್ಲಿ ನಗುವ ಎಲೆಯಂತೆ, ಬಿಸಿಲಿಗೆ ಬಾಡುವ ಹೂವಿನಂತೆ, ನಾನಾ ವೇಷ.
ಬರಹಗಾರನಿಗೆ ಮನದ ಭಾವನೆಗಳನ್ನೆಲ್ಲ ಹೊರ ಹಾಕಿದಾಗ, ಹಾಡುಗಾರನಿಗೆ ದನಿಯೇರಿಸಿ ಹಾಡಿದಾಗ, ಸಿಗುವ ಆನಂದ ಅನನ್ಯ. ಹಾರುವ ಹಕ್ಕಿಗಳನ್ನ ತಂದು ಕೂಡಿ ಹಾಕಬಹುದು, ಓಡುವ ಮನಸ್ಸನ್ನ?
ಮಳೆ ಚನ್ನ, ಮಳೆಗಾಲದ ಮುಂಜಾವು ಚನ್ನ. ಪುಟ್ಟ ಮಳೆ ಹನಿಯೊಂದು ಮುಖದಿಂದ ಮುಂಗಾಲಿನವರೆಗೆ ಜಾರಿದಾಗಿನ ಪುಳಕವೇ ಬೇರೆ. ಪ್ರತಿಯೊಂದು ಹನಿಯು ಒಂದೊಂದು ಮುತ್ತು. ಪ್ರತಿಯೊಂದು ಹನಿಯಲ್ಲೂ ಹೊಸತನವಿದೆ, ಆಕರ್ಷಣೆಯಿದೆ, ಚಂಚಲತೆಯಿದೆ, ಪುಳಕವಿದೆ, ನಲಿವಿದೆ.
ಓಡುವ ಮೋಡಗಳನ್ನೇರಿ ಸುತ್ತುವ ಆಸೆ ನನ್ನದು. ಮೋಡಗಳ ಮೇಲೆ ಮನೆ ಮಾಡುವ ಬಯಕೆ ನನ್ನದು. ಮಳೆಹನಿಗಳಲ್ಲೊಂದಾಗಿ ಉತ್ಸಾಹದಿಂದ ಧರೆಗಿಳಿಯುವ ಇಚ್ಚೆ ನನ್ನದು. ಮಾಗಿಯ ಮೇಲೆ ಮಳೆ ಬಂದಾಗ ಕುಣಿದಾಡಿದ್ದೇನೆ, ಮಾವಿನ ಮರದ ಬುಡದಲ್ಲಿ ನಿಂತು ಹಾಡಿದ್ದೇನೆ. ವಸಂತ ಕೋಗಿಲೆಯ ಕೂಗಿಗೆ ತಲೆದೂಗಿದ್ದೇನೆ. ಮೈ-ಮನಗಳನ್ನೆಲ್ಲ ತೋಯಿಸಿ ಹೋಗುವ ಮಳೆಗಾಲದ ಪ್ರತಿದಿನವೂ ಹುಣ್ಣಿಮೆ. ಇಂದು ತೋಯಿಸಿ ಹೋದ ಮಳೆಗೆ ಕಾಯುತಲಿರುವೆ, ನೀ ಬರುವೆ ಮತ್ತೊಮ್ಮೆ ಎಂದು.
- ಯಶು.

1 comment: