"Forget all the rules. Forget about being published. Write for yourself and celebrate writing.... Words can be short and easy to speak but their echoes are truly endless....!"
Wednesday, August 19, 2009
ಮನ ತೋಯಿಸುವ ಮಳೆ.....!!!
ಬರಹಗಾರನಿಗೆ ಮನದ ಭಾವನೆಗಳನ್ನೆಲ್ಲ ಹೊರ ಹಾಕಿದಾಗ, ಹಾಡುಗಾರನಿಗೆ ದನಿಯೇರಿಸಿ ಹಾಡಿದಾಗ, ಸಿಗುವ ಆನಂದ ಅನನ್ಯ. ಹಾರುವ ಹಕ್ಕಿಗಳನ್ನ ತಂದು ಕೂಡಿ ಹಾಕಬಹುದು, ಓಡುವ ಮನಸ್ಸನ್ನ?
ಮಳೆ ಚನ್ನ, ಮಳೆಗಾಲದ ಮುಂಜಾವು ಚನ್ನ. ಪುಟ್ಟ ಮಳೆ ಹನಿಯೊಂದು ಮುಖದಿಂದ ಮುಂಗಾಲಿನವರೆಗೆ ಜಾರಿದಾಗಿನ ಪುಳಕವೇ ಬೇರೆ. ಪ್ರತಿಯೊಂದು ಹನಿಯು ಒಂದೊಂದು ಮುತ್ತು. ಪ್ರತಿಯೊಂದು ಹನಿಯಲ್ಲೂ ಹೊಸತನವಿದೆ, ಆಕರ್ಷಣೆಯಿದೆ, ಚಂಚಲತೆಯಿದೆ, ಪುಳಕವಿದೆ, ನಲಿವಿದೆ.
ಓಡುವ ಮೋಡಗಳನ್ನೇರಿ ಸುತ್ತುವ ಆಸೆ ನನ್ನದು. ಮೋಡಗಳ ಮೇಲೆ ಮನೆ ಮಾಡುವ ಬಯಕೆ ನನ್ನದು. ಮಳೆಹನಿಗಳಲ್ಲೊಂದಾಗಿ ಉತ್ಸಾಹದಿಂದ ಧರೆಗಿಳಿಯುವ ಇಚ್ಚೆ ನನ್ನದು. ಮಾಗಿಯ ಮೇಲೆ ಮಳೆ ಬಂದಾಗ ಕುಣಿದಾಡಿದ್ದೇನೆ, ಮಾವಿನ ಮರದ ಬುಡದಲ್ಲಿ ನಿಂತು ಹಾಡಿದ್ದೇನೆ. ವಸಂತ ಕೋಗಿಲೆಯ ಕೂಗಿಗೆ ತಲೆದೂಗಿದ್ದೇನೆ. ಮೈ-ಮನಗಳನ್ನೆಲ್ಲ ತೋಯಿಸಿ ಹೋಗುವ ಮಳೆಗಾಲದ ಪ್ರತಿದಿನವೂ ಹುಣ್ಣಿಮೆ. ಇಂದು ತೋಯಿಸಿ ಹೋದ ಮಳೆಗೆ ಕಾಯುತಲಿರುವೆ, ನೀ ಬರುವೆ ಮತ್ತೊಮ್ಮೆ ಎಂದು.
- ಯಶು.
Thursday, August 13, 2009
ದಾರಿ (ಅವಕಾಶ)
ಕಾಲದ ತೆಕ್ಕೆ ಸೇರಿ,
ಕೊಂಕು ನಗೆಯ ಬೀರಿ.
ಭಾರಿ ಭಾರಿ ಆಸೆಯಲಿ ಜಾರಿ,
ಸ್ವಂತಿಕೆಯ ಸಂತೆಯಲಿ ಮಾರಿ,
ಆಯ್ದುಕೊಳದಾದೆಯ ಸರಿಯಾದ ದಾರಿ.
ಕೋರಿ ಕೋರಿ ಪಡೆದ ಆಸೆ ಜಾರಿ,
ಅವಿವೇಕದ ಸಂಘ ಸೇರಿ,
ಹಿಂತಿರುಗದಂತೆ ಹೋದವಲ್ಲ ಜಾರಿ.
ಮೀರಿ ಮೀರಿ ಬೆಳೆದ ಆಸೆ ಜಾರಿ,
ಬಿದ್ದು ಸೇರಿತಲ್ಲ ಮೋರಿ,
ಉಳಿದುದೊಂದೇ ನಿನ್ನ ಪೇಚು ಮಾರಿ.
ನಾಲ್ಕಾಣೆ
ಮಾಸಲಾರದು ನನ್ನ ಕ್ರಯ.
ವರುಷ ಉರುಳಿದರು ಸವೆದಿಲ್ಲ,
ನಾನು ಚಲಿಸದ ಸ್ಥಳವಿಲ್ಲ.
ಸಾವಿರ ಕೈಗಳು ಸ್ಪರ್ಶಿಸಿದರು ನನ್ನ,
ಯಾವ ಸ್ಪರ್ಶದ ನೆನಪು ನನಗಿಲ್ಲ.
ಒಮ್ಮೆ ಇರುವೆನು ಪುಟಾಣಿ ಕೈಯಲಿ,
ಮತ್ತೊಮ್ಮೆ ಯುವಕನೊಬ್ಬನ ಕಿಸೆಯಲ್ಲಿ.
ಬಡವನ ಮನೆಯಲ್ಲಿ ಕುಗ್ಗುವುದಿಲ್ಲ,
ಸಿರಿವಂತನ ಕಂಡೊಡೆ ಹಿಗ್ಗುವುದಿಲ್ಲ.
ಕರೆಯುವರು ಇವರೆಲ್ಲ ನನಗೆ ನಾಲ್ಕಾಣೆ,
ಎಲ್ಲಿಯವರೆಗೋ ನನ್ನ ಚಲಾವಣೆ ನಾ ಕಾಣೆ.
(ನಾಲ್ಕಾಣೆ ನಾಣ್ಯ ನಿಷೇದಿಸುವ ಮೊದಲು ಬರೆದದ್ದು)
ಕನಸು
ಬೆಳದಿಂಗಳ ಹೊನಲು,
ನನ್ನೊಳಗೆ ತುಂಬಿತ್ತು,
ನಿನ್ನಯ ಸ್ಮೃತಿಯು.
ಹಕ್ಕಿಗಳ ಕಲರವವು,
ಮುಟ್ಟಿತ್ತು ಮುಗಿಲು,
ಕಲರವದ ನಡುವೆಯೂ,
ಕೇಳಿ ಬರುತ್ತಿತ್ತು ನಿನ್ನ ದನಿಯು.
ದನಿಯೆಡೆಗೆ ಸಾಗಿತ್ತು,
ನನ್ನ ನಡೆಯು,
ನನಗಾಗಿ ಕಾದಿತ್ತು,
ನಿನ್ನ ದರ್ಶನವು.
ಮಿಂಚು ಹುಳುವಿನ ನೆನಪು,
ತರುತ್ತಿತ್ತು ನಿನ್ನ ಕಂಗಳ ಹೊಳಪು,
ನಿನ್ನ ಚಲುವಿಗೆ ಮೆರಗು,
ನೀಡಿತ್ತು ಬೆಳದಿಂಗಳ ತಂಪು.
ಹರುಷದಲಿ ಮೈಮರೆತು,
ಹಾಡಿತ್ತು ಮನಸು,
ಮಂಚದಿಂದ ಕೆಳಗೆ ಬಿದ್ದಾಗಲೇ,
ತಿಳಿದದ್ದು ನಾ ಕಂಡದ್ದು ಕನಸು.
Wednesday, August 12, 2009
ಮಳೆ ಮತ್ತು ಅವಳು
ಇಂದು ಮಳೆ ಬಂತು. ಋತುವಿನ ಮೊದಲ ಮಳೆ. "ಮೊದಲ ಮಳೆ ಚಂದ, ಬೆಳೆದ ಯೌವನ ಚಂದ", ಎಷ್ಟು ಸತ್ಯ ಆಲ್ವ.
ಬಿಸಿಲ ಬೇಗೆಯಲಿ ಬೆಂದು ಬಸವಳಿದ ಭೂರಮೆಗೆ ಇಂದು ಪನ್ನೀರ ಸಿಂಚನ.
ಒಂದು ವಿಷಯ ಗೊತ್ತಾ?... ಪ್ರತಿಯೊಂದು ಹನಿಯಲ್ಲೂ ನಿನ್ನ ನಗುವಿತ್ತು, ನಿನ್ನ ನಲಿವಿತ್ತು, ನಿನ್ನ ತುಂಟಾಟವಿತ್ತು. ಅದಕ್ಕೆ ಇರಬೇಕು ಮಸಲ ಧಾರೆಗೆ ಮೈ ಚಲ್ಲಿ ನಿಂತಾಗ ಎಂತದ್ದೋ ರೋಮಾಂಚಾನ.
ಪ್ರತಿಯೊಂದು ಹನಿಯಲ್ಲೂ ಚುಂಬಕತೆ ಇತ್ತು, ಅದಕ್ಕೆ ಪೂರ್ತಿಯಾಗಿ ನೆನೆದು ಹೋದೆ.
ನೀ ಬರುವ ದಾರಿಯಲ್ಲಿ ಗುಡುಗ ರೂಪದಲ್ಲಿ ಢಂಗೂರ ಸಾರಿದವರು ಯಾರೇ?. ಮಿಂಚ ರೂಪದಲ್ಲಿ ದೀಪ ಬೆಳಗಿದವರು ಯಾರೇ?.
ಎಷ್ಟು ಅವಸರ ನಿನಗೆ, ತಂಗಾಳಿಗೆ ಒಮ್ಮೆ ಅತ್ತ ಜಾರಿ, ಮತ್ತೆ ಇತ್ತ ಬರುವಾಗ ಅದೆಷ್ಟು ಭಯ ನನಗೆ, ನಿನ್ನ ನಡು ವು ಉಳೂಕಿತೆಂದು.
ಚಲಿಸುತಿದ್ದ ಮೋಡಗಳೆನಗೆ ಅಶ್ವಗಳು ಅನ್ನಿಸಿದ್ದವು. ನವಿರಾಗಿ ಬೀಸುತಿದ್ದ ತಂಗಾಳಿಯಲ್ಲಿ ಎಂತಹದೋ ಆನಂದ.
ಆದರೆ....... ಅಶ್ವಗಳ ವೇಗ ಅಷ್ಟೊಂದು ಇರಬಹುದೆಂದು ಊಹಿಸಿರಲಿಲ್ಲ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನೀನು ಮರೆಯಾಗಿದ್ದೆ.
ಎಷ್ಟೊಂದು ಕೋಪ ಬಂದಿತ್ತು. ಮತ್ತೆಂದೂ ನಿನ್ನ ನೋಡಬಾರದೆಂದುಕೊಂಡೆ, ಆದರೂ ಕಾಯತೊಡಗಿದೆ...
.... ಮತ್ತೊಂದು ಮಳೆಗಾಗಿ, ಅದು ಹೊತ್ತು ತರುವ ನಿನ್ನ ನುಡಿಗಾಗಿ,
ನಗುವಿಗಾಗಿ, ಚುಂಬನಕ್ಕಾಗಿ.
ಜೋಗಿ
ಹತ್ತು ಹಿತ್ತಲ ಸುತ್ತಿ,
ದುಂಡು ಮಲ್ಲಿಗೆ ಎತ್ತಿ,
ಕೆರೆಯ ಏರಿಯ ಕೆಳಗ,
ಸೂರ್ಯ ಇಳಿಯುವ ಒಳಗ,
ನಾನು ಬಂದೆನ ಮುತ್ತು ತಂದೇನ.
ಸಪ್ತ ಸಾಗರ ಸುತ್ತಿ,
ಬಿಳುಪು ಮುತ್ತನು ಹೆಕ್ಕಿ,
ಪಡುವ ಸೂರಿನ ಮೇಗ,
ಚಂದ್ರ ಏರುವ ಒಳಗ,
ನಾನು ಬಂದೆನ ಮುತ್ತು ತಂದೇನ.
ಮಲ್ಲೆ ಮುಡಿಯಲಿ ಕಟ್ಟಿ,
ಮುತ್ತು ಕೊರಳಲಿ ಸುತ್ತಿ,
ಸಂಜೆ ಮುಸುಕಿನ ನಡುವೆ,
ನಿಂತ ಕನಸಿನ ಚಲುವೆ ,
ಕಂಡೆ ನಾ, ಬೆರಗಾಗಿ ನಿಂತೇನಾ.
ಮುತ್ತು ಮೊಗದಲೆ ಇತ್ತು,
ಮಲ್ಲೆ ಕಣ್ಣಲೆ ಇತ್ತು,
ಕಣ್ಣು ಗುರುತಿಸದೇ ಹೋಗಿ,
ಸುತ್ತಿ ಸೋತ ನಾ ಜೋಗಿ,
ನೊಂದೇನ ಬೇಡಗಿ, ನೊಂದೇನಾ....!!!!