Sunday, October 2, 2011

ಎದ್ದೇಳಿ...!

ಬನ್ನಿರಿ, ಬನ್ನಿರಿ, ನವ ಯುವಕರೇ ಬನ್ನಿ,
ಭವ್ಯ ಭಾರತದ ಉದಯಕ್ಕೆ ಅಣಿಯಾಗಿ ಬನ್ನಿ,
ಮತವೆಂಬ ಕಿಚ್ಚ, ಮೆಟ್ಟಿ ಮುಂದೆ ಬನ್ನಿ,
ಜಾತಿ ಧರ್ಮದ ಬೇಲಿ, ಕಿತ್ತೊಗೆದು ಬನ್ನಿ.

ಬಡವ ಬಲ್ಲಿದನೆಂಬ ಭೇದವಿಲ್ಲಿಲ್ಲ ಬನ್ನಿ,
ಆತ್ಮವಿಶ್ವಾಸದ ನಗೆಯ, ಬೀರುತ್ತ ಬನ್ನಿ,
ಸತ್ಯಕ್ಕೆ ಎಂದೆಂದೂ ಜಯವಿಹುದು ಬನ್ನಿ,
ನ್ಯಾಯದೇವತೆಯ ಕಣ್ಣ, ಕರಿ ಬಟ್ಟೆ ಬಿಚ್ಚೋಣ ಬನ್ನಿ.

ಬಿಸಿ ರಕ್ತದ ಯುವಕರೇ, ಭರವಸೆಯ ಹೊತ್ತು ಬನ್ನಿ,
ದುಷ್ಟ ಜನಗಳ, ಬಗ್ಗು ಬಡಿಯಲು ಬನ್ನಿ,
'ವಂದೇ ಮಾತರಂ' ಮಂತ್ರ, ಕೂಗುತ್ತ ಬನ್ನಿ,
ಮಾನವೀಯತೆ ಮೆರೆಯಲು, ಸಂತಸದಿ ಬನ್ನಿ.

ನೊಂದ ರೈತರೆ, ಆತ್ಮಹತ್ಯೆಯ ಮರೆತು ಬನ್ನಿ,
ಶೋಷಿತ ಕಾರ್ಮಿಕರೆ, ಎಚ್ಚೆತ್ತು ಬನ್ನಿ,
ಬ್ರಷ್ಟಾಚಾರ ರಹಿತ ದೇಶವ, ಕಟ್ಟುವ ಬನ್ನಿ,
ದುಷ್ಟ ಕೂಟವ ನಾವು, ಮಟ್ಟ ಹಾಕುವ ಬನ್ನಿ.